ಮಾರಟೇನಿಯ
ಆಫ್ರಿಕದ ವಾಯವ್ಯದಲ್ಲಿರುವ ಒಂದು ಇಸ್ಲಾಮಿ ಗಣರಾಜ್ಯ. ಇದು ಉತ್ತರ ಆಫ್ರಿಕದ ಮಾಗ್ರಿಬ್ ಪ್ರದೇಶ, ಪಶ್ಚಿಮ ಆಫ್ರಿಕದ ಸೆನೆಗಲ್ ಪ್ರದೇಶಗಳನ್ನು ಭೌಗೋಳಿಕವಾಗಿ ಒಂದುಗೂಡಿಸುವ ಕೊಂಡಿಯಂತಿದ್ದು ಉತ್ತರದಲ್ಲಿ ಆಲ್ಜೀರಿಯ, ವಾಯವ್ಯದಲ್ಲಿ ಸ್ಪಾನಿಷ್ ಸಹರಾ ಮರುಭೂಮಿ, ಪೂರ್ವ ಮತ್ತು ಆಗ್ನೇಯದಲ್ಲಿ ಮಾಲಿ ಹಾಗೂ ದಕ್ಷಿಣದಲ್ಲಿ ಸೆನೆಗಲ್ ರಾಜ್ಯಗಳು ಇದನ್ನು ಸುತ್ತುವರಿದಿವೆ. ಉತ್ತರದಿಂದ ದಕ್ಷಿಣಕ್ಕೆ 1287 ಕಿಮೀ. ಪೂರ್ವದಿಂದ ಪಶ್ಚಿಮಕ್ಕೆ 1255 ಕಿಮೀ ಇರುವ ಇದರ ವಿಸ್ತೀರ್ಣ 1,030.700 ಚಕಿಮೀ. ಜನಸಂಖ್ಯೆ 1,834,500 (1984). ರಾಜಧಾನಿ ನೂವಾಕ್‍ಷಾಟ್.
ಮೇಲ್ಮೈ ಲಕ್ಷಣ: ಮಾರಟೇನಿಯದ ಬಹುಭಾಗ ಪಶ್ಚಿಮ ಸಹರಾ ಮರುಭೂಮಿಗೆ ಸೇರಿದೆ. ಉತ್ತರ ಭಾಗ ಮರಳು ದಿಬ್ಬಗಳಿಂದ ಕೂಡಿದ್ದು ಹಲವಾರು ಕಿಮೀಗಳಷ್ಟು ದೂರ ಚಾಚಿಕೊಂಡಿದೆ. ದಕ್ಷಿಣ ಭಾಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗುವುದರಿಂದ ವ್ಯವಸಾಯ ಮತ್ತು ಪಶುಪಾಲನೆಗೆ ಅನುಕೂಲವಿದೆ. ಸೆನೆಗಲ್ ನದಿಯುದ್ದಕ್ಕೂ ಇರುವ ಕಿರಿದಾದ ಬಯಲು ಪ್ರದೇಶ ಮತ್ತು ಆಗ್ನೇಯ ಭಾಗದಲ್ಲಿಯ ಸವನ್ನಾ ಮಾದರಿಯ ಹುಲ್ಲುಗಾವಲು ಪ್ರದೇಶದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 80ರಷ್ಟು ಮಂದಿ ವಾಸಿಸುತ್ತಾರೆ.

ವಾಯುಗೂಣ: ಮಾರಟೇನಿಯದಲ್ಲಿ ಉಷ್ಣತೆ ಹೆಚ್ಚಿರುವ ಶುಷ್ಕ ಹವಾಗುಣವಿದೆ. ಇಲ್ಲಿಯ ಶುಷ್ಕತೆಗೆ ವರ್ಷದಲ್ಲಿ ಸದಾಕಾಲವೂ ಬೀಸುವ ಈಶಾನ್ಯ ವಾಣಿಜ್ಯ ಮಾರುತಗಳೇ ಕಾರಣ. ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳನ್ನು ಕಾಣಬಹುದು. ಮರುಭೂಮಿಯಲ್ಲಿ ದಿನದ ಉಷ್ಣತೆ 380ಅ ಇದ್ದು ರಾತ್ರಿಯಲ್ಲಿ 70ಅ ಗೆ ಇಳಿಯುತ್ತದೆ. ಉತ್ತರ ಭಾಗದಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆ. ದಕ್ಷಿಣ ಭಾಗದಲ್ಲಿ ವರ್ಷಕ್ಕೆ ಸುಮಾರು 51 ಸೆಂಮೀ ಮಳೆ ಬೀಳುತ್ತದೆ.

ಜನಜೀವನ: ಮಾರಟೇನಿಯದ ಒಟ್ಟು ಜನಸಂಖ್ಯೆಯಲ್ಲಿ 99 ಭಾಗ ಮುಸ್ಲಿಮರು. ಇವರಲ್ಲಿ ಅನೇಕ ಪಂಗಡಗಳಿದ್ದು ಪ್ರತಿಯೊಂದು ಪಂಗಡದ ಜೀವನ ಕ್ರಮ ಬೇರೆ ಬೇರೆ ರೀತಿಯದು. ಅರಬ್ ಮತ್ತು ಬರ್ಬರ ಸಂತತಿಯ ಮೂರ್ ಜನಾಂಗದವರು ಇಲ್ಲಿ ಬಹುಸಂಖ್ಯಾತರು. ಆಡಳಿತ ಭಾಷೆ ಫ್ರೆಂಚ್ ಆದರೂ ಹೆಚ್ಚು ಜನ ಅರ್ಯಾಬಿಕ್ ಭಾಷೆಯನ್ನಾಡುವರು. ಮೂರ್‍ಜನ ಅಲೆಮಾರಿ ಜೀವನವನ್ನವಲಂಬಿಸಿರುವರು. ಸ್ಥಳದಿಂದ ಸ್ಥಳಕ್ಕೆ ತಮ್ಮ ಪಶುಗಳ ಮೇವಿಗಾಗಿ ಅಲೆದಾಡುತ್ತಿರುತ್ತಾರೆ. ಫ್ರೆಂಚರು ಇಲ್ಲಿಗೆ ಬರುವ ತನಕ ಮೂರ್ ಯೋಧರು ಕುಲೀನ ವರ್ಗದವರಾಗಿದ್ದು ಕರಿಯ ಗುಲಾಮರನ್ನು ಹೊಂದಿದ್ದರು. ಇನ್ನೊಂದು ಗುಂಪಾದ ಪವಿತ್ರ ಕುಲದವರ ಮುಖ್ಯವೃತ್ತಿ ಪಶುಪಾಲನೆ. ಇವರು ತಮ್ಮ ಧರ್ಮವನ್ನು ವ್ಯಾಸಂಗಮಾಡುವುದರ ಜೊತೆಗೆ ಯೋಧರಿಗೆ ಸಲಹೆ ನೀಡುತ್ತಿದ್ದರು. ಮೂರ್‍ಜನರಲ್ಲಿ ಅರ್ಧ ಮಂದಿ ಬಿಳಿಯರು. ಉಳಿದ ಅರ್ಧಮಂದಿ ಸೂಡಾನೀ ಮೂಲದ ಕರಿಯರು. ಕಪ್ಪು ಆಫ್ರಿಕನ್ನರು ಇಲ್ಲಿಯ ಅಲ್ಪಸಂಖ್ಯಾತರು. ಇತ್ತೀಚಿನ ವರ್ಷಗಳಲ್ಲಿ ಅಲೆಮಾರಿ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಅಲೆಮಾರಿತನದ ಕಷ್ಟ ಕೋಟಲೆಗಳು, ರಾಜಕೀಯ ಮತ್ತು ವ್ಯಾಪಾರ ಪರಿಸ್ಥಿತಿಗಳಲ್ಲಿ ಬದಲಾವಣೆ, ನೀರಿನ ಕೊರತೆಯ ನಿವಾರಣೆಗಾಗಿ ಅಣೆಕಟ್ಟುಗಳ ನಿರ್ಮಾಣ, ಪಶುಪಾಲನೆಗೆ ಉತ್ತೇಜನ ಇತ್ಯಾದಿ. ಒಟ್ಟು ಜನಸಂಖ್ಯೆಯಲ್ಲಿ 1-5 ಭಾಗದಷ್ಟಿರುವ ಕರಿಯ ರೈತರು ಸೆನೆಗಲ್ ನದಿಯುದ್ದಕ್ಕೂ ಹಳ್ಳಿಗಳಲ್ಲಿ ನೆಲಸಿದ್ದಾರೆ. ಅವರ ಗುಡಿಸಲುಗಳು ವೃತ್ತಾಕಾರದಲ್ಲಿದ್ದು ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ಕಟ್ಟಲಾಗಿದೆ.

ಫ್ರೆಂಚ್ ಆಡಳಿತ ಭಾಷೆಯಾಗಿದ್ದು ಅರ್ಯಾಬಿಕ್ ರಾಷ್ಟ್ರ ಭಾಷೆಯಾಗಿದೆ. ಮೂರ್ ಜನ ಅರ್ಯಾಬಿಕ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕರಿಯರು ದ್ವಿಭಾಷಾ ಪದ್ಧತಿಯನ್ನು ಬೆಂಬಲಿಸುತ್ತಿದ್ದಾರೆ. ಈ ಭಾಷಾ ಸಮಸ್ಯೆ ದೇಶದ ಐಕ್ಯತೆಗೆ ಅತ್ಯಂತ ಗಂಡಾಂತರಕಾರಿಯಾಗಿದೆ ಎನ್ನುವರು.

ಮಾರಟೇನಿಯಲ್ಲಿ ವಿದ್ಯಾವಂತರ ಸಂಖ್ಯೆ ಬಹಳ ಕಡಿಮೆ. ಶೇಕಡಾ 10ರಷ್ಟು ಮಕ್ಕಳು ಮಾತ್ರ ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುತ್ತಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಫ್ರಾನ್ಸ್ ಅಥವಾ ಸೆನೆಗಲ್‍ಗೆ ಹೋಗಬೇಕಾಗುತ್ತದೆ.

ಸಸ್ಯ ಮತ್ತು ಪ್ರಾಣಿಸಂಪತ್ತು: ಇಲ್ಲಿಯ ಸಸ್ಯ ಸಂಪತ್ತು ಆಯಾ ಸ್ಥಳದ ಶುಷ್ಕತೆಯ ಪರಿಣಾಮವನ್ನವಲಂಬಿಸಿದೆ. ದಕ್ಷಿಣದಿಂದ ಉತ್ತರಕ್ಕೆ ಹೋದಂತೆಲ್ಲ ಶುಷ್ಕತೆ ಹೆಚ್ಚಾಗುತ್ತದೆ. ದಕ್ಷಿಣಭಾಗದಲ್ಲಿ ಸುಡಾನಿಕ್ ಸವನ್ನಾ ಹುಲ್ಲುಗಾವಲಿದ್ದು ಇದರಲ್ಲಿ ಬಾವೊಬಾಬ್ ಮತ್ತು ತಾಳೆ ಜಾತಿಯ ಮರಗಳನ್ನು ಕಾಣಬಹುದು. ಇಲ್ಲಿಂದ ಉತ್ತರಕ್ಕೆ ಹೋದಂತೆ ಸಹೇಲ್ ಸಸ್ಯರಾಶಿಯನ್ನು ನೋಡಬಹುದು. ಇಲ್ಲಿ ಮರಗಳ ಸಂಖ್ಯೆ ಬಹಳ ಕಡಿಮೆ. ಅಕೇಷಿಯ, ಯೂರ್ಫೋರ್ಬಿಯ ಮುಂತಾದ ಪೊದೆಗಳಿವೆ. ಮುಂದೆ ಹೋದಂತೆಲ್ಲ ಮರಳುಗಾಡುಗಳಿದ್ದು ಒಣಗಿದ ನದೀತೀರಗಳು ಹಾಗೂ ಓಯಸಿಸ್ಸುಗಳಲ್ಲಿ ಮಾತ್ರ ಸಸ್ಯಗಳನ್ನು ಕಾಣಬಹುದು.

ಸವನ್ನಾ ಹುಲ್ಲುಗಾವಲಿನಲ್ಲಿ ಜಿಂಕೆ ಹಾಗೂ ಸಿಂಹಗಳಿವೆ. ದಕ್ಷಿಣ ಮಾರಟೇನಿಯದ ಅಫೋಲೆ ಪ್ರದೇಶದಲ್ಲಿ ಆನೆಗಳ ಹಿಂಡುಗಳನ್ನು ನೋಡಬಹುದು. ಸ್ಟೆಪ್ಟಿ ಮತ್ತು ಬೆಂಗಾಡುಗಳಲ್ಲಿ ಗಜೆóಲ್ ಜಾತಿಯ ಜಿಂಕೆಗಳು, ಉಷ್ಟ್ರಪಕ್ಷಿಗಳು, ಕಾಡುಹಂದಿ, ಚಿರತೆ, ಲಿಂಕ್ಸ್ ಎಂಬ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ ಮತ್ತು ಮೊಸಳೆಗಳಿವೆ. ಇತ್ತೀಚೆಗೆ ಬೇಟೆಯ ಹಾವಳಿಯಿಂದ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇವುಗಳ ಸಂರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಆರ್ಥಿಕತೆ: ಮಾರಟೇನಿಯ ಆರ್ಥಿಕತೆ ವ್ಯವಸಾಯವನ್ನು ಅವಲಂಬಿಸಿದೆ. ಶೇಕಡಾ 90ರಷ್ಟು ಜನ ಬೇಸಾಯ ಹಾಗೂ ಪಶುಪಾಲನೆಯಲ್ಲಿ ನಿರತರಾಗಿದ್ದಾರೆ. ಇಲ್ಲಿಯ ಮುಖ್ಯ ಬೆಳೆಗಳು ಮಿಲೆಟ್, ಖರ್ಜೂರ ಗಮ್ ಅರಾಬಿಕ ಎಂಬ ಜಾಲಿಯ ಜಾತಿಯ ಮರದ ಗೋಂದು. ಬೇಸಾಯ ಮಳೆಯನ್ನವಲಂಬಿಸಿದೆ. ಸಮುದ್ರತೀರದಲ್ಲಿ ಹೇರಳವಾಗಿ ಮೀನುಗಳು ಸಿಗುತ್ತವೆ.

ಖನಿಜಸಂಪತ್ತು ಸಹ ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗಿದೆ. ಫೋರ್ಟ್ ಗೌರಾಡ್ ಬಳಿ ಉತ್ತಮಮಟ್ಟದ ಕಬ್ಬಿಣ ನಿಕ್ಷೇಪಗಳಿವೆ. ಫ್ರೆಂಚ್ ಕಂಪನಿಯೊಂದು ಕಬ್ಬಿಣದ ಅದುರನ್ನು ಹೊರತೆಗೆಯುವ ಕಾರ್ಯ ನಿರ್ವಹಿಸುತ್ತಿದೆ. ಕಬ್ಬಿಣದ ಅದುರನ್ನು ಮುಖ್ಯವಾಗಿ ಗ್ರೇಟ್ ಬ್ರಿಟನ್, ಜರ್ಮನಿ ಹಾಗೂ ಇಟಲಿಗಳಿಗೆ ರಫ್ತುಮಾಡಲಾಗುತ್ತಿದೆ. ನ್ವಾಡಿಭೂ ಎಂಬುದು ಸಹರಾ ತೀರದಲ್ಲಿಯ ಏಕೈಕ ಆಳವಾದ ಬಂದರಾಗಿದ್ದು ಇಲ್ಲಿ ಸು.150,000 ಟನ್ ತೂಕದ ಹಡಗುಗಳು ನಿಲ್ಲಬಹುದಾಗಿದೆ. ಅಕ್‍ಜಾಟ್‍ನಲ್ಲಿ ತಾಮ್ರದ ನಿಕ್ಷೇಪಗಳಿವೆ. ನೂವಾಕ್ ಷಾಟ್ ಬಳಿಯಲ್ಲಿ ಜಿಪ್ಸಮ್ ಹಾಗೂ ದಕ್ಷಿಣದ ತುದಿಯಲ್ಲಿ ಟೈಟಾನಿಯಮ್ ಇರುವ ಇಲ್ಮನೈಟ್ ಅದುರಿನ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ. ತೈಲಕ್ಕಾಗಿ ನಡೆಸಿದ ಶೋಧಗಳು ಈ ತನಕ ಫಲಪ್ರದವಾಗಿಲ್ಲ. ಇಲ್ಲಿಂದ ರಫ್ತಾಗುವ ಪದಾರ್ಥಗಳೆಂದರೆ ಕಬ್ಬಿಣದ ಅದುರು ಮತ್ತು ಮೀನುಗಳು. ಟೀ, ಸಕ್ಕರೆ, ಅಕ್ಕಿ ಹಾಗೂ ಇತರ ಆಹಾರ ಪದಾರ್ಥಗಳು, ಸಾರಿಗೆ ಉಪಕರಣಗಳು, ಕಟ್ಟಡದ ಸಾಮಗ್ರಿಗಳು ಇಲ್ಲಿಗೆ ಆಮದಾಗುತ್ತವೆ. ದೇಶದ ಒಟ್ಟು ಆದಾಯದ 1/6 ಭಾಗ ರಫ್ತಿನ ಸುಂಕದಿಂದ ಬರುತ್ತದೆ.

ಮಾರಟೇನಿಯದ ಜನರ ಆದಾಯ ಬಹಳ ಕಡಿಮೆ. ಹಣದ ಕೊರತೆಯನ್ನು ತುಂಬಲು ಸರ್ಕಾರ ಮುಖ್ಯವಾಗಿ ಫ್ರಾನ್ಸಿನ ನೆರವನ್ನು ಅವಲಂಬಿಸಿದೆ. ಮಾಂಸ ಸಂಸ್ಕರಣ, ಕೈಗಾರಿಕೆ ಹಾಗೂ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರ ಇದಕ್ಕೆ ಸಾರಿಗೆಯ ಕೊರತೆ ಪ್ರಮುಖವಾದ ಅಡ್ಡಿಯಾಗಿದೆ. ಮಾರಟೇನಿಯದಲ್ಲಿ 676 ಕಿಮೀ ದೂರದ ರೈಲುಮಾರ್ಗ ಮತ್ತು 4990 ಕಿಮೀ ಮಣ್ಣಿನ ರಸ್ತೆಗಳಿವೆ. ಸರ್ಕಾರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದ್ದು ಇದರಲ್ಲಿ ಸೆನೆಗಲ್ ನದಿ ಕಣಿವೆಯ ಅಭಿವೃದ್ಧಿ, ತಾಳೆಮರಗಳನ್ನು ನೆಡುವುದು, ಬಾವಿಗಳನ್ನು ತೋಡುವುದು, ಖರ್ಜೂರದ ಗುಣಮಟ್ಟವನ್ನು ಉತ್ತಮಗೊಳಿಸುವುದು, ಮೀನುಗಾರಿಕೆಯ ಅಭಿವೃದ್ಧಿಗಾಗಿ ತರಬೇತಿಕೇಂದ್ರ ಹಾಗೂ ಶೈತ್ಯಾಗಾರ ಸ್ಥಾಪನೆ. ಮೀನೆಣ್ಣೆ ತಯಾರಿಸುವ ಮತ್ತು ಮೀನುಗಳನ್ನು ಒಣಗಿಸುವ ಕಾರ್ಖಾನೆಯ ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ಆಡಳಿತ: 1960ರಲ್ಲಿ ಸ್ವತಂತ್ರವಾದ ಬಳಿಕ ಇಲ್ಲಿ ಅಧ್ಯಕ್ಷರ ಆಡಳಿತ ಪದ್ಧತಿಯಿತ್ತು. 1978ರ ಜುಲೈನಲ್ಲಿ ಮಿಲಿಟರಿ ಕ್ರಾಂತಿಯಾದಾಗ ರಾಷ್ಟ್ರೀಯ ಅಸೆಂಬ್ಲಿ ಹಾಗೂ ಅಧ್ಯಕ್ಷೀಯ ಸರ್ಕಾರ ಪತನವಾಗಿ ಸರ್ಕಾರ ಸೈನ್ಯದ ವಶವಾಯಿತು. ಸೈನ್ಯದ ಅತ್ಯುನ್ನತ ಅಧಿಕಾರಿ ಈಗ ಅಧ್ಯಕ್ಷನಾಗಿ ಅಧ್ಯಕ್ಷನಿಗೆ ನೆರವಾಗುತ್ತಾರೆ. ಇವರಲ್ಲೊಬ್ಬ ಪ್ರಧಾನಿಮಂತ್ರಿಯೂ ಆಗಿರುತ್ತಾನೆ. ಪ್ರಧಾನ ಮಂತ್ರಿಯ ಕೆಳಗೆ ಮಂತ್ರಮಂಡಲ ಇದ್ದು ಸರ್ಕಾರದ ಕೆಲಸಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. ಮಿಲಿಟರಿ ಕ್ರಾಂತಿಯ ಬಳಿಕ ಇಲ್ಲಿಯ ಏಕೈಕ ರಾಜಕೀಯ ಪಕ್ಷ ಪಾರ್ಟಿ ಡ್ಯು ಪೀಪಲ್ ಮಾರಟೇನಿಯವನ್ನು ರದ್ದುಗೊಳಿಸಲಾಯಿತು. ಇದರ ಬೆಂಬಲಿಗರು ಪ್ಯಾರಿಸ್‍ನಲ್ಲಿ ಒಂದು ಪಕ್ಷವನ್ನು ಸ್ಥಾಪಿಸಿ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿದ್ದಾರೆ. ಮತ್ತೊಂದು ವಿರೋಧಿ ಚಳವಳಿಯಾದ ಆರ್ಗನೈಸೀಷನ್ ಡೆಸ್ ನ್ಯಾಷಲಿಸ್ಟಿಸ್ ಮಾರಟೇನಿಯನ್ಸ್ ಪಕ್ಷವನ್ನು 1984ರಲ್ಲಿ ಸೆನೆಗಲ್ ದೇಶದ ಕಾರ್‍ನಲ್ಲಿ ಸ್ಥಾಪಿಸಲಾಗಿದೆ. ಮಾರಟೇನಿಯವನ್ನು ಏಳು ಆಡಳಿತ ಪ್ರದೇಶ ಹಾಗೂ ರಾಜಧಾನಿ ನೂವಾಕ್‍ಷಾಟ್ ಒಳಗೊಂಡ ಒಂದು ಜಿಲ್ಲೆಯಾಗಿ ವಿಂಗಡಿಸಲಾಗಿದೆ.

ಇತಿಹಾಸ: ಕ್ರಿ.ಶ. 300 ರಿಂದ 1500ರ ತನಕ ಈಗಿನ ಮಾರಟೇನಿಯ ಇರುವ ಪ್ರದೇಶ ಪಶ್ಚಿಮ ಆಫ್ರಿಕದ ಘಾನಾ ಹಾಗೂ ಮಾಲಿ ಸಾಮ್ರಾಜ್ಯಗಳ ಭಾಗವಾಗಿತ್ತು. ಈ ಶತಮಾನದ ಮೊದಲ ಭಾಗದಲ್ಲಿ ಮಾರಟೇನಿಯದ ಆಗ್ನೇಯ ಭಾಗದಲ್ಲಿ ಘಾನಾ ಸಾಮ್ರಾಜ್ಯದ ರಾಜಧಾನಿ ಕುಂಬಿ ಸಲೇಹದ ಅವಶೇಶಗಳನ್ನು ಪತ್ತೆ ಹಚ್ಚಲಾಗಿದೆ. 15ನೆಯ ಶತಮಾನದಲ್ಲಿ ಪೋರ್ಚುಗೀಸರು ಇಲ್ಲಿಗೆ ಬಂದರೂ 17ನೆಯ ಶತಮಾನದ ತನಕ ಯೂರೋಪಿಯನ್ ಸಂಪರ್ಕ ಹೆಚ್ಚಾಗಿರಲಿಲ್ಲ. 17 ಮತ್ತು 18ನೆಯ ಶತಮಾನದಲ್ಲಿ ಫ್ರಾನ್ಸ್, ಗ್ರೇಟ್‍ಬ್ರಿಟನ್ ಮತ್ತು ನೆದರ್‍ಲ್ಯಾಂಡ್ಸ್ ಅರ್ಯಾಬಿಕ್ ಗೋಂದಿನ ವ್ಯಾಪಾರಕ್ಕಾಗಿ ಪೈಪೋಟಿ ನಡೆಸಿದುವು. 1902ರಲ್ಲಿ ಫ್ರಾನ್ಸ್ ಮಾರಟೇನಿಯವನ್ನು ಆಕ್ರಮಿಸಲು ಪ್ರಾರಂಭಿಸಿ 1903ರಲ್ಲಿ ತನ್ನ ಆಶ್ರಿತ ಪ್ರದೇಶವನ್ನಾಗಿ ಮಾಡಿಕೊಂಡಿತು. ಇದರ ಮೊದಲನೆಯ ಗವರ್ನರ್ ಜೇóವಿಯರ್ ಕೊಪೊಲಾನಿ ಫ್ರೆಂಚ್ ಆಡಳಿತವನ್ನು ಈಗಿನ ಮಾರಟೇನಿಯ ದೇಶಾದ್ಯಂತ ವಿಸ್ತರಿಸಿದ. 1920ರಲ್ಲಿ ಮಾರಟೇನಿಯ ಫ್ರೆಂಚ್ ವಸಾಹತಾಯಿತು.

ಎರಡನೆಯ ಮಹಾಯುದ್ಧ ನಂತರ ಮಾರಟೇನಿಯ 1958ರಲ್ಲಿ ಫ್ರೆಂಚ್ ಅಧೀನದ ಸ್ವಯಮಾಡಳಿತ ಪ್ರದೇಶವಾಯಿತು. 1960 ನವೆಂಬರ್ 28ರಂದು ಮಾರಟೇನಿಯ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಯಿತು. ಮಾರಟೇನಿಯ ಚಾರಿತ್ರಿಕವಾಗಿ ತನಗೆ ಸೇರಿದ ಪ್ರದೇಶವೆಂದು ಮೊರಾಕೊ ವಾದಿಸಿ ಅದರ ಸ್ವಾತಂತ್ರ್ಯವನ್ನು 1970ರ ತನಕ ಅಂಗೀಕರಿಸಲಿಲ್ಲ. 

1961ರಲ್ಲಿ ಮಾರಟೇನಿಯ ಅಧ್ಯಕ್ಷೀಯ ಸರ್ಕಾರವಿರುವ ರಾಜ್ಯಾಂಗವನನ್ನು ಅಂಗೀಕರಿಸಿತು. ಅದರ ಮೊದಲನೆಯ ಅಧ್ಯಕ್ಷ ಮಾರಟೇನಿಯದ ನಾಲ್ಕು ರಾಜಕೀಯ ಪಕ್ಷಗಳನ್ನು ಮಾರಟೇನಿಯನ್ ಪೀಪಲ್ಸ್ ಪಾರ್ಟಿ ಎಂಬ ಹೆಸರಿನ ಒಂದೇ ಪಕ್ಷವಾಗಿ ರೂಪಿಸಿದ. 1965ರ ರಾಜ್ಯಾಂಗದ ತಿದ್ದುಪಡಿಯ ಅನುಸಾರವಾಗಿ ಇದು ಏಕಪಕ್ಷೀಯ ದೇಶವಾಯಿತು.

1976ರಲ್ಲಿ ಸ್ಪೇನ್ ಸ್ಪಾನಿಷ್ ಸಹರಾದ ಮೇಲಿನ ತನ್ನ ಪ್ರಭುತ್ವವನ್ನು ಬಿಟ್ಟು ಕೊಟ್ಟಿತು. ಮಾರಟೇನಿಯ, ಮೊರಾಕೋ ಮತ್ತು ಆಲ್ಜೀರಿಯಗಳ ನಡುವಣ ಈ ಪ್ರದೇಶವನ್ನು ಸ್ಪಾನಿಷ್ ಸಹರಾ ಎಂದು ಕರೆಯಲಾಗುತ್ತಿದೆ. ಈ ದೇಶದ ದಕ್ಷಿಣಭಾಗ ಮೊರಾಕೋದ ಉತ್ತರ ಭಾಗ ತನಗೆ ಸೇರಿದ್ದೆಂದು ಮಾರಟೇನಿಯ ಸಾಧಿಸಿತು. ಇವೆರಡು ದೇಶಗಳ ಸೈನ್ಯಗಳ ಮತ್ತು ಪಶ್ಚಿಮ ಸಹರಾ ಜನತೆಯ ಸಂಸ್ಥೆಯಾದ ಪೊಲೆಸಾರಿಯೊ ಫ್ರೆಂಚ್ ಸೈನ್ಯಗಳ ನಡುವೆ ಕಾದಾಟ ಪ್ರಾರಂಭವಾಯಿತು. 1979ರಲ್ಲಿ ಮಾರಟೇನಿಯ ಪಕ್ಷ ಸಹರಾದ ಮೇಲಿನ ತನ್ನ ಹಕ್ಕನ್ನು ಬಿಟ್ಟಿಕೊಟ್ಟು ಯುದ್ಧವನ್ನು ನಿಲ್ಲಿಸಿತು. 1978ರಲ್ಲಿ ಮಿಲಿಟರಿ ಕ್ರಾಂತಿಯಾಗಿ ಅಧ್ಯಕ್ಷೀಯ ಸರ್ಕಾರದ ಪತನವಾಯಿತು. ದೇಶ ಮಿಲಿಟರಿ ಆಡಳಿತದ ವಶವಾಯಿತು.
	(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ